ನೆನಪಿನ ಪುಟಗಳನ್ನು ತೆರೆದಾಗ..

ಅದೇ ಬಸ್ಸ್ಟಾಂಡ್. ಒಂದು ಮೂಲೆಯಲ್ಲಿ ಆತ  ಕೂತ್ಕೊಂಡಿದ್ದಾನೆ. ತುಂತುರು ಮಳೆ ಜಿನುಗುತ್ತಿತ್ತು. ಆತನ ಕಣ್ಣಲ್ಲಿ ಕಣ್ಣೀರ ಹನಿ ಇಣುಕುತ್ತಿತ್ತು ಒಂದು ಕಡೆಯಿಂದ ಬಸ್ಸಿಗಾಗಿ ಕರೆಯುವವರು ಮಡಿಕೇರಿ...ವಿರಾಜಪೇಟೆ...ಪೊನ್ನಂಪೇಟೆ...ಮತ್ತೊಂದು ಕಡೆಯಿಂದ ಕಡಲೆ, ಟೀ, ಕಾಫಿ ಮಾರುವವರ ಕೂಗಾಟ. ಇವರುಗಳ ಮಧ್ಯೆ ಈತನ ಕೂಗು ಯಾರಿಗಾದರು ಕೇಳಿಸೀತೆ?. ಅಲ್ಲಿದ್ದ ಪ್ರತಿಯೊಬ್ಬರೂ ಕಾರ್ಯ ಮಗ್ನವಾಗಿದ್ದರು ತಮ್ಮ ಬದುಕಿನ ಗುರಿಯತ್ತ ಸಾಗುವಲ್ಲಿ... ಆತನ ದುಃಖದಿಂದ ಕೂಡಿದ ಚಿಕ್ಕ ಮುಖ ನೋಡಿ ಬಸ್ಸ್ಟಾಂಡಿನ ಗೋಡೆಗಳೂ ನಿಸ್ಸಾಹಾಯಕವಾಗಿದ್ದವು. ಮಡಿಲ ಮಗುವೊಂದು ಅಮ್ಮನ ಸೆರಗಿನಿಂದ ಹೊರಗಿಣುಕಿ ನೋಡಿದಾಗ ಅವನಿಗೆ ಅಮ್ಮನ ನೆನಪಾಗದೆ ಇದ್ದೀತೆ?. ಮನೆಯ ನೆನಪಗಳು ಎದೆಯಂಗಳದಲ್ಲಿ ಹಾರಿಹೊಂದಂತೆ ನೋವಿನ ಗೆರೆಗಳು ಇನ್ನು ದಪ್ಪವಾಗಿದ್ದವು.

ಮೊದಲೇ ನಿರ್ಧರಿಸಿದಂತೆ ಆತ ಬೆಳಿಗ್ಗೆ ಆರಕ್ಕೆ ಹಾಸ್ಟೆಲಿನಿಂದ ಹೊರಬಂದಿದ್ದ. ಅಂದೇಕೋ ಸೋಮಾರಿ ಸೂರ್ಯನೂ ಮನೆ ಬಿಟ್ಟಿರಲಿಲ್ಲ. ತಳ್ಳುಗಾಡಿಯವರು ತರಕಾರಿ ತುಂಬಿದ ಗಾಡಿಗಳೊಂದಿಗೆ ಮುಂದೆ ಹೋಗುತ್ತಲೇ ಇದ್ದರು. ಆತನೂ ಮುಂದೆಕ್ಕೆ ಸಾಗಿದ್ದ ಗೊತ್ತು ಗುರಿಯಿಲ್ಲದೆ. ಚಿಲಿಪಿಗುಟ್ಟುತ್ತಿರುವ ಹಕ್ಕಿಗಳೂ ಆತನಿಗೆ ಸಾಥ್ ನೀಡದೆ ಹೋದವು. ಅಂತು ಇಂತೂ ಕೊನೆಗೆ ತಲುಪಿದ್ದು ಅದೇ ಗೊನಿಕೊಪ್ಪಲಿನ ಬಸ್ಸು ತಂಗುದಾಣ. ತರಾತುರಿಯಿಂದ ಓಡಾಡುವ ಬಸ್ಸುಗಳ , ಜನಗಳ ಮಧ್ಯೆ ಇವನು ಒಬ್ಬಂಟಿಯಾಗಿದ್ದ.

ಏನೋ ಇಂಜಿನಿಯರಿಂಗ್ ಓದಬೇಕೆಂಬ ಆಸೆಯಿಂದ ಇಂಜಿನಿಯರಿಂಗ್ ಕಾಲೇಜ್ ಸೇರಿದ್ದೂ ಆಯಿತು. ಕಾಲೇಜ್ ಹಾಸ್ಟೆಲ್ ಸೇರೋಣವೆಂದರೆ ಕೈಯಲ್ಲಿ ಅಸ್ಟೊಂದು ದುಡ್ಡಿಲ್ಲ. ಕಾಲೇಜ್ ಸ್ಟಾರ್ಟ್ ಆಗಿ ಎರಡು ದಿನ ಯಾರೋದೋ ಮನೆಯಲ್ಲಿ ಅಡ್ಜಸ್ಟ್ ಮಾಡಿದ್ದ. ಇನ್ನು ಮುಂದೆ? ಮಂಗಳೂರಿಂದ ಒಂದು ಹಳ್ಳಿಯಿಂದ ಬಂದ ಇವನಿಗೆ ಇಲ್ಲಿ ಗೊತ್ತಿರುವವರು ಯಾರು ಇರಲಿಲ್ಲ. ಸರಕಾರಿ ಹಾಸ್ಟೆಲ್ನಲ್ಲಿ ಕೇಳಿದಾಗ ಸೀಟ್ ಬರ್ತಿ ಆಗಿದೆ ಎಂಬ ಉತ್ತರ. ಗೋಣಿಕೊಪ್ಪಲು ಕಾಲೇಜಿನ ಕ್ಲೆರ್ಕಿನ ಸಹಾಯದಿಂದ ಸ್ವಲ್ಪ ದಿನದ ಮಟ್ಟಿಗೆ ಅಂತ ಸರಕಾರಿ ಹಾಸ್ಟೆಲಿನಲ್ಲಿ ಮತ್ತೆ ಅಡ್ಜಸ್ಟ್ ಮಾಡ್ಕೊಂಡ. ಹಾಸ್ಟೆಲಿನ ವಾರ್ಡನ್, ಮೇಲಾಧಿಕಾರಿಗಳಿಗೆ ಈ ವಿಷಯ ಗೊತ್ತಿಲ್ಲ.ಅಡುಗೆಯವರ ಮತ್ತು ಈತನ ಮಧ್ಯೆ ಒಳ ಒಪ್ಪಂದ! ದಿನಗಳು ಹೀಗೆ ಮುಂದುವರಿದವು. ಹಾಸ್ಟೆಲಿನ ದಿನಗಳನ್ನು ಬರೆಯಲು ಹೊರಟರೆ ಅವನಿಗೆ ಇನ್ನೊಂದು ಲೇಖನ ಬೇಕಾಗಬಹುದೇನೋ.

ಅಂದು ಅಕ್ಟೋಬರ್ ೨. ಗಾಂಧೀ ತಾತ ಹುಟ್ಟಿದ ದಿನ. ಹಾಸ್ಟೆಲಿನಲ್ಲಿ ತುಂಬಾ ಕಾರ್ಯಕ್ರಮಗಳಿದ್ದ ಕಾರಣ ಅಧಿಕಾರಿಗಳ ಆಗಮನ ಇತ್ತು. ಅಡುಗೆಯವರ ಸೂಚನೆಯಂತೆ ಅಂದು ಆತ ಹಾಸ್ಟೆಲಿನಲ್ಲಿ ಯಾರಿಗೂ ಸಿಗಬಾರದಾಗಿತ್ತು. ಅಧಿಕಾರಿಗಳಿಗೆ ಗೊತ್ತಾದರೆ ಹಾಸ್ಟೆಲಿನಿಂದ ಹೊರಗೆ ಹಾಕುವುದಂತೂ ಸತ್ಯ. ಅಡುಗೆಯವರೂ ಜೊತೆಗೆ. ಹಿಂದಿನ ದಿನ ನಿದ್ದೆಯಲ್ಲೂ ಅದೇ ಯೋಚನೆ. ನಾಳೆ ಬೆಳಿಗ್ಗೆ ೬ ಕ್ಕೆ ಸರಿಯಾಗಿ ಇಲ್ಲಿಂದ ಹೊರಡಬೇಕು ಅಷ್ಟೇ ಗೊತ್ತು. ಕೊನೆಗೆ ತಲುಪಿದ್ದು ಅದೇ ಗೊನಿಕೊಪ್ಪಲಿನ ಬಸ್ಸು ತಂಗುದಾಣ. ಇದರೊಂದಿಗೆ ಮೊದಲ ಸಾರಿ ಮನೆಯಿಂದ ಹೊರಗಡೆಗಿನ ವಾಸ ಅವನಿಗೆ ನುಂಗಲಾರದ ತುತ್ತಾಗಿತ್ತು. ಅಂತು ಹೇಗೋ ಆ ಒಂದು ದಿನವನ್ನು ದುಖದಲ್ಲಿಯೇ ಕಳೆದ. ರಾತ್ರಿ ಎಂಟು ಗಂಟೆಗೆ ಹಾಸ್ಟೆಲ್ಗೆ ಬಂದು ನಿದ್ರಾದೇವಿಗೆ ಶರಣಾದ. ಮತ್ತೆ ನೆನಪು ಕನಸುಗಳೊಂದಿಗೆ...ಆ ಮಗು ಮಾತ್ರ ಮತ್ತೆ ಮತ್ತೆ ಕಣ್ಣಂಚಿನ ಪರೆದೆಯಲ್ಲಿ ಬರುತ್ತಾ ಇತ್ತು.

ಇದು ನನ್ನ ಜೀವನದಲ್ಲಿ ನಡೆದ ನಿಜ ಘಟನೆ. ಮತ್ತೆ ಕಾಲೇಜ್ ಚೇಂಜ್ ಮಾಡಿ ಇಂಜಿನಿಯರಿಂಗ್ ಓದು ಮುಗಿಸಿದ್ದು ಈಗ ಇತಿಹಾಸ. ಬಾಲ್ಯದಲ್ಲಿನ ಬಡತನದಿಂದ ಕಳೆದ ಆ ದಿನಗಳಿಂದ ನಾನು ತುಂಬಾ ಕಲಿತೆ. ನಾನು ಯಾವಾಗಲೂ ಹೇಳ್ತುರ್ತೀನಿ "ಆವಾಗ ಮನೆಯಲ್ಲಿ ಮನಿ ಇರಲ್ಲಿಲ್ಲ, ಮಾನವೀಯತೆ ಇತ್ತು. "  ಪ್ರತಿಯೊಂದು ನೋವಿನಲ್ಲೂ ಒಂದೊಂದು ಪಾಠವಿರುತ್ತದೆ ಅಲ್ಲವೇ..?

ಸುಮ್ನೆ ಹೀಗೆ

ಮನದ ಭಾವನೆಗಳನ್ನು ಗೀಚಬೇಕೆಂಬ ಕನಸಿನೊಂದಿಗೆ ಬೆಡ್ ಮೇಲೆ ಬಿದ್ದುಕೊಂಡೆ ಪುಸ್ತಕ ಪೆನ್ನಿನ ಜೊತೆಗೆ. ಅದು ಯಾವಾಗ ನಿದ್ದೆ ಹತ್ತಿತೋ?. ಕನಸು ಕನಸಾಗಿಯೇ ಇತ್ತು. ಪೆನ್ನು ಪುಸ್ತಕದ ಖಾಲಿ ಖಾಲಿ ಹಾಳೆಗಳನ್ನು ನೋಡುತ್ತಾ ಅಲ್ಲೇ ಮಲಗಿತ್ತು. ಸೂರ್ಯ ಸೋಮಾರಿ ಆಗಲಿಲ್ಲ. ಅವನು ಆಗಲೇ ಎದ್ದು ಕಿಟಕಿನಂಚಿನಿಂದ ಇಣುಕುತಿದ್ದ. ನಾನೇ ಸೋಮಾರಿಯಾಗಿದ್ದೆ!
***************

ಏನೋ ತಪ್ಪು ಮಾಡಿದ್ದೇನೆಂದು ನೋವಿನಿಂದ ಕೂಡಿದ ಭಾರವಾದ ಮನಸ್ಸಿನಿಂದ  ಕಿಟಕಿಯಿಂದ ಇಣುಕಿ ನೋಡುತಲಿದ್ದೆ... ದೂರದಲ್ಲಿ ಮಗುವೊಂದು ತನ್ನ ಪುಟ್ಟ ಕಾಲುಗಳಿಂದ ತಪ್ಪು ತಪ್ಪು ಹೆಜ್ಜೆಗಳೊಂದಿಗೆ ನಡೆಯಲು ಪ್ರಯತ್ನಿಸುತ್ತಿತ್ತು.
***************

ಸ್ವಲ್ಪ ಕೆಲಸದ ಒತ್ತಡ ಜಾಸ್ತಿ ಇದ್ದುದರಿಂದ ಬಳಲಿದ್ದ ಅವಳಿಗೆ  ಬೆಡ್ ಮೇಲಿಂದ ಎದ್ದೇಳಲು ಏನೋ ಸುಸ್ತು. ಮನಸಿಲ್ಲದ ಮನಸ್ಸಿನಿಂದ ಮಸುಕು ತೆಗೆದು ಇನ್ನು ಕಾಫಿ ಮಾಡ್ಬೇಕಲ್ವ ಎಂದು ನೋಡಿದರೆ ಅಲ್ಲೇ ಪಕ್ಕದಲ್ಲಿ ಕಾಫಿ ಅವಳಿಗಾಗಿ ಕಾಯುತ್ತಿತ್ತು. ಅಡುಗೆಮನೆಯಿಂದ ಗಂಡ ಸುಮ್ನೆ ಮಲ್ಕೋ .... ನಾನಿದ್ದೇನೆ ಎಂದು ಕಣ್ಣು ಮಿಟುಕಿಸಿದಾಗ ಗಂಡನ ಮೇಲಿನ ಪ್ರೀತಿ ಇನ್ನು ಬೆಚ್ಚಗಾಗಿತ್ತು ಕಾಫಿಯ ಜೊತೆಗೆ.
ಸುಂದರ ಬದುಕಿನ ಅನೋನ್ಯತೆಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಎಷ್ಟು ಮುಖ್ಯ ಅಲ್ಲವೇ...ಸ್ವಲ್ಪ ತುಂಟತನ ತರಲೆಗಳೂ ಇದ್ದರೆ ಇನ್ನು ಖುಷಿ!!
***************

ಹೇಗೆ ಮರೆಯೋಕ್ಕಾಗುತ್ತೆ

ಕಳೆದ ಎರಡು ತಿಂಗಳಿಂದ ಕೆಲಸದ ನಿಮಿತ್ತ ಮರಳುಗಾಡು ಬಹರೈನಿನಲ್ಲಿ ಇರಬೇಕಾಗಿರುವುದರಿಂದ ಒಂಥರಾ ಒಂಟಿ ಜೀವನದ ಅನುಭವವನ್ನು ಪಡೆಯುತ್ತಿದ್ದೇನೆ ಎಂದರೆ ಅತಿಶಯವಾಗದು. ನನ್ನ ಬಾಲ್ಯದ ಮಧುರ ನೆನಪುಗಳೇ ನನಗೆ ಈಗ ಸಾಥ್ ನೀಡುತ್ತಿವೆ. ಅವುಗಳಲ್ಲಿ ಒಂದೆರಡನ್ನು ಅಕ್ಷರ ರೂಪಕ್ಕೆ ತಂದು ನಿಮ್ಮ ಮುಂದೆ ಇಟ್ಟಿದ್ದೇನೆ. ಓದಿ.. ಚೆನ್ನಾಗಿಲ್ಲಂದ್ರೆ ಬಯ್ಬೇಡಿ ಪ್ಲೀಸ್ ನಾ ...


ನನ್ನ ಹೈಸ್ಕೂಲ್ ಜೀವನದಲ್ಲಿ ನಡೆದ ಘಟನೆ:- ಎಲ್ಲಡೆ ಇರವಂತೆಯೇ ನಮ್ಮ ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡುವ ಮುಖಾಂತರ ತರಗತಿಗಳು ಪ್ರಾರಂಭವಾಗುತ್ತವೆ. ಎಲ್ಲರೂ ಸಾಲಾಗಿ ನಿಂತು ಗೌರವ ಕೊಡಬೇಕು. ನಾನು ಮತ್ತು ನನ್ನ ಬಾಲ್ಯ ಸ್ನೇಹಿತ ಜೊತೆಗೆ ನಿಂತೆರೆನೆ ಅದಕ್ಕೊಂದು ಮಜಾ. ಪ್ರಾರ್ಥನೆ ಸುರುವಾಗಿತ್ತು. ನಾನೇನೋ ಕೀಟಲೆ ಮಾಡಿದೆ ಗೆಳಯನಿಗೆ. ತರಲೆ , ಕೀಟಲೆ,ನಗುವುದು, ನಗಿಸುವುದು ನಮ್ಮ ಅಲಿಖಿತ ನಿಯಮವಾಗಿತ್ತು. ನಗುವನ್ನು ಹೊಟ್ಟೆಯೊಳಗಿಂದ ಒತ್ತರಿಸಿಕೊಳ್ಳಲು ಸಾಧ್ಯವಾಗದೇ ಗುಸುಕ್ಕೆಂದು ನಕ್ಕುಬಿಟ್ಟ. ನಾನೂ ಜೋರಾಗಿ ನಕ್ಕುಬಿಟ್ಟೆ. ಕ್ಲಾಸ್ ಟೀಚರ್ ನೋಡಬೇಕೇ? . ಹೊಡೆತದ ಜೊತೆಗೆ ಬೈಗುಳದ ಮಂಗಳಾರತಿ ಆಯಿತು. ನೋವಲ್ಲೂ ಖುಷಿಯಿತ್ತು ಬಿಡಿ. ಇನ್ನೊಂದು ಸಲ ಮಾಡಿದರೆ ಪ್ರಿನ್ಸಿಪಾಲ್ಗೆ ಕಂಪ್ಲೇಂಟ್ ಅಂತ ಗದರಿಸಿಬಿಟ್ರು. ಮಾಡಿದ ತಪ್ಪಿಗಾಗಿ ಮರುದಿನ ಪ್ರಾರ್ಥನಾ ಸಮಯದಲ್ಲಿ ಎಲ್ಲರ ಮುಂದೆ ಕ್ಷಮೆ ಕೇಳಬೇಕು ಎಂದು ಕಟ್ಟಪ್ಪಣೆ ಬೇರೆ. ಆಯಿತು ಮರುದಿನ ಎಲ್ಲರ ಮುಂದೆ ಹೋದೆವು. ಅದೇನೋ ಭಯ. ಸಾವಿಗಿಂತಲೂ ಹೆಚ್ಚಿನದ್ದು. ಎಲ್ಲರ ಮುಂದೆ ಹೋಗ್ಬೇಕಲ್ವ. ಕೈಮುಗಿದು ಒಕ್ಕೊರಲಿನಿಂದ "ಇನ್ನು ಮುಂದೆಂದೂ ಈ ತಪ್ಪು ಮಾಡಲ್ಲ. ನಮ್ಮನ್ನು ಕ್ಷಮಿಸಬೇಕು" ಎಂದೆವು. ಮರುಕ್ಷಣ ಮತ್ತೆ ಗೊಳ್ಳೆಂದು ನಗಬೇಕೇ... ಅಲ್ಲಿದ್ದ ಎಲ್ಲರೂ ನಮಗೆ ಸಾಥ್ ನೀಡಿ ಜೋರಾಗಿ!! ಕ್ಲಾಸ್ ಟೀಚರ್ ಜೊತೆಯಾದರು ನಮಗೆ ಅಂದರೆ ನಮ್ಮ ಪೋಕರಿತನ ಎಸ್ತಿರ್ಬೇಕು ನೀವೇ ಹೇಳಿ. ಮತ್ತೆ ಪ್ರಿನ್ಸಿಪಾಲ್ಗೆ ಕ್ಷಮಾಪನ ಪತ್ರ ಬರೆದು ಅಲ್ಲಿ ಸ್ವಲ್ಪ ಮಂಗಳಾರತಿ ಮಾಡಿಸ್ಕೊಂಡಿದ್ದು ಈಗ ಇತಿಹಾಸ.

ಕಳೆದು ಹೋದ ದಿನಗಳನ್ನು ನೆನಿಸಿಕೊಂಡರೆ ನಗು ಬರುತ್ತದೆ ಅಲ್ಲವೇ ? ದುರಾದ್ರಷ್ಟಕರ ಎಂದರೆ ಈ ಸವಿ ನೆನಪನ್ನು ಹಂಚಿಕೊಳ್ಳಲು ನನ್ನೊಂದಿಗಿಲ್ಲ ಅವನು. ವಿಧಿಯಾಟದಲ್ಲಿ ಸಿಕ್ಕಿ ಬರೀ ನೆನಪ್ಗಳನ್ನು ಬಿಟ್ಟು ಬಲು ದೂರ ಸಾಗಿದ್ದಾನೆ.

ಇನ್ನೊದು ಘಟನೆ :- ಇಂಜಿನಿಯರಿಂಗ್ ಕಾಲೇಜ್ಗೆ ಸೇರಿದ ಮೊದಲ ದಿನಗಳು. CET ಸ್ಪೆಷಲ್ ಕೌನ್ಸೆಲ್ಲಿಂಗ್ ಇದೆಯೆಂದು ಸುದ್ದಿಯಾಗಿತ್ತು. ಇನ್ನೇನು ಒಂದು ಕೈ ನೋಡೇ ಬಿಡೋಣವೆಂದು ನಮ್ಮ ನಿರ್ಧಾರ. ಗೆಳೆಯರಾದ ಲೋಕಿ, ಪ್ರಸನ್ನ ಮತ್ತು ನಾನು ಅರೆ ಮನಸ್ಸಿನಿಂದ ಹೊರಟೆವು. ಸುಳ್ಯದಿಂದ ಮೈಸೂರ್ ತನಕ ಬಸ್ಸ್ ಅಲ್ಲಿಂದ ಬೆಂಗಳೂರ್ ತನಕ ಟ್ರೈನಲ್ಲಿ ಹೋಗೊದಾಗಿ ಪ್ಲಾನ್ ಮಾಡಿದೆವು. ಯಾಕೇಂತ ಮತ್ತೆ ಹೇಳ್ತೀನಿ. ರಾತ್ರಿ ಒಂದು ಗಂಟೆಗೆ ಮೈಸೂರು ತಲುಪಿದೆವು.ಮತ್ತೆ ಕೊಡುವುದಾಗಿ ಹೇಳಿದ್ದ ಚಿಲ್ಲರೆ (೯೦) ನಿದ್ರೆಯ ಮಂಪರಿನಲ್ಲಿ ಕಂಡಕ್ಟರ್ ನಿಂದ ತೆಗೆದುಕೊಳ್ಳಲು ಮರೆತುಬಿಟ್ಟೆವು. ಕಂಡಕ್ಟರ್ ನೂ ಬೇಕಂತಲೇ ನಿದ್ದೆ ಮಾಡಿದ ಹಾಗೆ ನಟನೆ ಮಾಡಿದ್ನೇನೋ?. ಆದಿನದ ಮೊದಲ ಪೆಟ್ಟು ನಮ್ಮ ಕಿಸೆಗೆ. ಸವಾರಿ ಸಾಗಿತ್ತು ರೈಲ್ವೆ ಸ್ಟೇಷನತ್ತ . ನಮ್ಮ ಜೊತೆಗೆ ಬ್ಯಾಗುಗಳೂ!! . ಸ್ಟೇಷನಲ್ಲಿ ವಿಚಾರಿಸಿದಾಗ ಬೆಳಿಗ್ಗೆ ನಾಲ್ಕು ಗಂಟೆಗೆ ಬೆಂಗಳೂರು ರೈಲು ಎಂದು ಗೊತ್ತಾಯಿತು. ಏನ್ಮಾಡೋದು? ಪ್ಲಾಟ್ಫಾರಂ ಸುತ್ತಾಡಿ ಬರೋಣವೆಂದು ನುಗ್ಗಿದೆವು ಒಳಗಡೆ. ರಾಜಾರೋಷದಿಂದ ಸುತ್ತಾಡಿದೆವು ರೈಲ್ವೆ ಸ್ಟೇಷನ್ ನಮ್ಮದೇ ಎಂಬಂತೆ. ಎಲ್ಲಿಂದಲೋ ಬಂದ ಟ್ರೈನಿನಿಂದ ಪ್ರಯಾಣಿಕರು ಬಂದಿಳಿದರು. ಅವರ ಜೊತೆಗೆ ನಾವು ಸಾಗಿದೆವು. ಗೇಟ್ ಹತ್ತಿರ ನಿಂತಿದ್ದ ಇಬ್ಬರು ಕೆಲವರನ್ನು ತಡೆದು ಟಿಕೆಟ್ ತೋರಿಸೋಕೆ ಹೇಳ್ತಾ ಇದ್ದರು. ಇದೆಲ್ಲ ನಮಗಲ್ಲ ಎಂದು ನಾವು ಸೀದಾ ಮುಂದೆ ಹೋದೆವು. ಆ ಭೂಪರು ನಮ್ಮನ್ನೇ ಕರಿಬೇಕೆ? ಟಿಕೆಟ್ ಎಲ್ಲಿ ಅಂತ ಕೇಳಿದ. ಸಾರ್ ನಾವು ಸುಮ್ನೆ ಹೀಗೆ ಸುತ್ತಡೋಕೆ ಬಂದಿದ್ದು ಅಂತ ಹೇಳಿದೆವು . ತಪ್ಪು ನಿನ್ದೆ ಎಂಬಂತೆ!! ಇನ್ನೂ ಬಿಡದ ಅವನು ಪ್ಲಾಟ್ಫಾರಂ ಟಿಕೆಟ್ ಎಲ್ಲಿ ? ಜೀವನದಲ್ಲಿ ಮೊದಲ ಸಾರಿ ಕೇಳಿದ ಹಾಗೆ ನಮ್ಮಲ್ಲಿ ಇಲ್ಲ ಅಂತ ಸನ್ನೆ ಮಾಡಿದೆವು. ಅಲ್ಲೇ ಇದ್ದ ಸೆಕ್ಯೂರಿಟಿ ಜನರನ್ನು ಕರೆದು ನಮ್ಮನ್ನು ಕೋಣೆಯೊಳಗೆ ಕೂಡಿ ಹಾಕಲು ಹೇಳಿದ್ರು. ಅಯ್ಯೋಯೋ ಎಂಥ ಪಜೀತಿ ಆಗೊಯೋತು! ಈಗ ನಾವು ಮೂವರು ಕೋಣೆಯೊಳಗೆ ಕೈದಿಗಳ ತರಹ ! ಒಂದು ಗಂಟೆಯಾದ್ರೂ ಯಾರದು ಪತ್ತೆ ಇಲ್ಲ! ಒಂದು ಕಡೆಯಿಂದ ಭಯ. ಇನ್ನೊದು ಕಡೆಯಿಂದ ನಗು. ಕೊನೆಗೂ ಅಸಾಮಿಯೊಬ್ಬ ಬಂದು ಬನ್ನಿ ಎಂದ. ಎಲ್ಲಿ ? ಮುಂದೆ ಹೋದ ...ನಾವು ಅವನ ಹಿಂದೆ. ಯಾರೋ ಸ್ಟೇಷನ್ ಮಾಸ್ಟರ್ ಅಂತೆ . ಅವನತ್ರ ಹೋದೆವು. ಬೈಗುಳದ ಮಂಗಳರತಿಯಯಿತು. 800 ಫೈನ್ ಅಂದ. ಆದಿನದ ಎರಡೆನೆಯ ಪೆಟ್ಟು!! ಸಾರು ನಮಗೆ ಪ್ಲಾಟ್ಫಾರಂ ಟಿಕೆಟ್ ಬಗ್ಗೆ ಗೊತ್ತಿರಿಲಿಲ್ಲ. ನಾವು ಹೊಸಬ್ಬರು. ಬೆಂಗಳೂರಿಗೆ CET ಕೌನ್ಸೆಲಿಂಗ್ ಹೋಗ್ತಾ ಇದ್ದೇವಿ.ನಮ್ಮಲ್ಲಿ ಇರೋದೇ 800 ಅಂತೆಲ್ಲ ಸಬೂಬು ಹೇಳಿದೆವು. ಅವನು ಒಪ್ಪಬೇಕೆ..(ದುಡ್ಡು ಸಾರ್ ದುಡ್ಡು !) ಕೊನೆಗೆ ಹಾಗು ಹೀಗೂ ಮಾಡಿ 400 ಇಳಿಸಿದ ಅಸಾಮಿ. ನಷ್ಟದಲ್ಲಿ ಲಾಭ! ಅವತ್ತು ನಮ್ಮ ಮುಖ ನೋಡಬೇಕಿತ್ತು ನೀವು. ಅದೆಲ್ಲ ಮುಗಿದಾಗ ನಾಕು ಗಂಟೆ. ಟಿಕೆಟ್ ತೆಗೆದುಕೊಂಡು :) ಮತ್ತೆ ಸಾಗಿತು ನಮ್ಮ ಪ್ರಯಾಣ. ಬೆಂಗಳೂರಿನತ್ತ....

ಹೇಗೆ ಮರೆಯೋಕ್ಕಾಗುತ್ತೆ ಸಾರ್ ಆ ಪ್ಲಾಟ್ಫಾರಂ - ಟಿಕೆಟ್ ! ನೆನಪುಗಳು ನೆನೆಯಲಿಕ್ಕೆಂದೇ ಅಲ್ಲವೇ.

ಮನದ ಸಾಲುಗಳು

ಸಾವು ಏತಕೆ?
ಕಣ್ಣೀರ ಬರಿಸಲೆಂದೇ ಈ ಸಾವೇ?
ಮನವು ಕೇಳಿತು ನನ್ನ
ಉತ್ತರಿಸದಾದೆ ನಾ
ಬುದ್ದನನ್ನಾದರು ಕೇಳೋಣವೆಂದರೆ
ಅವನು ಸಾಸಿವೆ ತರಲು ಹೋಗಿದ್ದ!

ಸಿನೇಮಾ 
ಬದುಕು ಸಿನೆಮಾದಲ್ಲಿ ಒಬ್ಬನೇ ಪಾತ್ರಧಾರಿ
ಕಾಲವೇ ನಿರ್ದೇಶಕ
ಕಾಲವು ಚಲಿಸಿದಂತೆ ಪಾತ್ರಗಳು ಹೆಚ್ಚುತ್ತಾ ಹೋಗುತ್ತವೆ
ಒಂಥರಾ ಬಹುಪಾತ್ರಾಭಿನಯದ ಸಿನೆಮಾವಿದ್ದಂತೆ.

ಕನ್ನಡಿ
ಹುಡುಕಾಡಿದೆ ಅವಳಿಗಾಗಿ
ಜನಜಂಗುಳಿಯಲ್ಲಿ ಜಗದಂಗಳದಿ
ಎಲ್ಲೇಲ್ಲೂ ಕಂಡೆ ನನ್ನದೇ ಮುಖ
ಅವಳಾಗಿದ್ದಳು ಎನ್ನ ಮನದ ಕನ್ನಡಿ

ಬದುಕು

ಬದುಕೆಂಬುದು ಕವಿತೆಯಾದಾಗ
       ಪದಗಳಾಗುವೆ ನಾ
ಬದುಕೆಂಬುದು ಪಯಣವಾದಾಗ
       ಪಯಣಿಗನಾಗುವೆ ನಾ
ಬದುಕೆಂಬುದು ಬೆಳಕಾದಾಗ
       ಕಿರಣವಾಗುವೆ ನಾ
ಬದುಕೆಂಬುದು ಕಲೆಯಾದಾಗ
       ಕಲಾಕಾರನಾಗುವೆ  ನಾ
ಬದುಕೆಂಬುದು ಪಾಠವಾದಾಗ
       ವಿದ್ಯಾರ್ಥಿಯಾಗುವೆ  ನಾ
ಬದುಕೆಂಬುದು ಸಂಗೀತವಾದಾಗ
       ಶ್ರುತಿಯಾಗುವೆ ನಾ
ಬದುಕೆಂಬುದು ಕನ್ನಡಿಯಾದಾಗ
       ಪ್ರತಿಬಿಂಬವಾಗುವೆ ನಾ
ಬದುಕೆಂಬುದು ಸಂಭಂಧಗಳ ಸರಪಳಿಯಾದಾಗ
        ಕೊಂಡಿಯಾಗುವೆ ನಾ
ಬದುಕೆಂಬುದು ದೀಪವಾದಾಗ
       ಬತ್ತಿಯಾಗುವೆ ನಾ
ಬದುಕೆಂಬುದು ಉಡುಗೂರೆಯಾದಾಗ
       ಸಂತೋಷದಿ  ಸ್ವೀಕರಿಸುವವನಾಗುವೆ ನಾ

ನಾ ನಿನ್ನಲ್ಲಿ ಕಂಡೆ

ಹೂವಿನ ಮನಸ್ಸು ಏನೆಂದು ನಾನರಿಯೆ
ಆ ಹೂವನ್ನು ನಾ ನಿನ್ನಲ್ಲಿ ಕಂಡೆ

 ಮಗುವಿನ ಮುಗ್ದತೆಯ ಅಗಾಧತೆ ಏನೆಂದು ನಾನರಿಯೆ
ಆ ಮಗುವನ್ನು ನಾ ನಿನ್ನಲ್ಲಿ ಕಂಡೆ

 ತ್ಯಾಗದ ಮಿತಿ ಏನೆಂದು ನಾನರಿಯೆ
ಆ ತ್ಯಾಗಮಯಿಯನ್ನು ನಾ ನಿನ್ನಲ್ಲಿ ಕಂಡೆ

 ಪ್ರೀತಿಯ ಆಳವೇನೆಂದು ನಾನರಿಯೆ
ಆ ಪ್ರೀತಿಯನ್ನು ನಾ ನಿನ್ನಲ್ಲಿ ಕಂಡೆ

 ಬೆಳಕಿನ ಪರಿಮಿತಿ ಏನೆಂದು ನಾನರಿಯೆ
ಆ ಕಾಂತಿಯನ್ನು ನಾ ನಿನ್ನಲ್ಲಿ ಕಂಡೆ

 ಕರುಣೆಯ ಶಕ್ತಿ ಏನೆಂದು ನಾನರಿಯೆ
ಆ ಕರುಣಾಮಯಿಯನ್ನು ನಾ ನಿನ್ನಲಿ ಕಂಡೆ

 ಅಮ್ಮ ನಿನ್ನಲ್ಲಿ ನಾ ಎಲ್ಲವನ್ನೂ ಕಂಡೆ
ಇದೋ ನಾ ಎಂದೆಂದಿಗೂ ಚಿರಋಣಿ


ಏನೋ ಬರೆಯಬೇಕೆಂದೇ

ಏನೋ ಬರೆಯಬೇಕೆಂದು ಹಂಬಲದಿಂದಲೇ
ಕೂತೆ ಪುಸ್ತಕ ಪೆನ್ನು ಹಿಡಿದು
ಮನದಿ ಮೊದಲ ಸಾಲು ಮೂಡಿಬರುವ ಮೊದಲೇ
ಕುಣಿಯತಲಿತು ಹೊಟ್ಟೆ ಹಸಿವಿನಿಂದ ಹಠವಿಡಿದು
ಎದ್ದು ಹೋದೆ ಅಡುಗೆ ಮನೆಗೆ ಪದೇ ಪದೇ
ತಡಕಾಡಿದೆ ತಿನ್ನಲು ಏನೋ ಸಿಗಬಹುದೆಂದೇ
ಅಲ್ಲಲ್ಲೇ ಬಿದ್ದಿದ್ದವು ಪಾತ್ರೆಗಳು ತೊಳೆಯದೆ
ನೋಡಲು ಅಸಾಹಕತೆಯಿಂದ ನನ್ನನ್ನೇ
ಮತ್ತೆ ಬಂದು ಕೂತೆ ಏನೋ ಬರೆಯಬೇಕೆಂದೇ
ಮೊದಲ ಸಾಲು ಮೂಡಿಬಂದಿತು ಆಗಲೇ
"ದೇವಾ ಹಸಿವ ತಾಳಲಾರೆನೆಯ್ಯಾ" ಎಂದೇ

ಆ ಗ್ರೀನ್ ಸಿಗ್ನಲ್

ತುಂತುರು ಮಳೆ ಸುರಿಯುತ್ತಾ ಇತ್ತು . ನನ್ನ ಹೋಂಡ ಅಕ್ಟಿವ ರಭಸದಿಂದ ಮುನ್ನುಗ್ಗುತ್ತಾ ಇತ್ತು. ಇನ್ನೇನು ಸರ್ಕಲ್ ಕ್ರಾಸ್ ಮಾಡೋಣ ಅನ್ನುವಸ್ಟರಲ್ಲಿ ರೆಡ್ ಸಿಗ್ನಲ್ ಆನ್ ಆಗಿಯೇ ಬಿಟ್ಟಿತು . ಹಾಕಿದೆ ಬ್ರೇಕ್ ಚರ್ರಕ್ಕನೆ!. ನಿಂತಿತು ನನ್ನ ಹೋಂಡ ಅಕ್ಟಿವ ಗಕ್ಕನೆ. ಎದೆ ಬ್ರೇಕ್ ಅಗುವಸ್ಟು ಭಯ ಉಂಟಾಗಿತ್ತು ಹಿಂದೆಯಿಂದ ಯಾರಾದರು ಗುದ್ದಿದೆರೆಂದು. ಗಾಡಿ ಆಪ್ ಮಾಡಿ ಎರಡು ಕೈಗಳನ್ನು ಹ್ಯಾಂಡಲ್ ನಿಂದ ತೆಗೆದು ಉಸ್ಸಪ್ಪಾ ಎಂದು ಆರಾಮವಾಗಿ ಗ್ರೀನ್ ಸಿಗ್ನಲಗಾಗಿ ಕಾಯುತ್ತಾ ಇದ್ದೆ. ಹೀಗೆ ಸುಮ್ಮನೆ ಪಕ್ಕಕ್ಕೆ ನೊಡಿದೆ . ನನ್ನದೇ ತರಹದ ಹೋಂಡ ಅಕ್ತಿವದಲ್ಲಿ ಕೂತಿರುವ ಹುಡುಗಿ ನನ್ನನ್ನೇ ನೊಡುತ್ತಿರಲು ನನ್ನ ಹೃದಯ ಬಡಿತ ನಿಂತೇ ಹೋಗಿತ್ತು . ಆ ಕ್ಷಣ ಇಬ್ಬರ ಕಣ್ಣುಗಳು ಒಬ್ಬೊರೊನ್ನೊಬ್ಬರು ನೊಡುತ್ತಿದ್ದವು. ಇಬ್ಬರೂ ಮುಗುಳ್ನಗೆ ಬೀರಲು ನನಗೆ ಅ ಕ್ಷಣ ಭುವಿಯೇ ಸ್ವರ್ಗದಂತೆ ಕಂಡಿತು . ಆ ತುಂಬಿದ್ದ ವಾಹನಗಳ ಮಧ್ಯೆ ನಾವಿಬ್ಬರೇ ಇದ್ದೆವು. ಕವಿಹೃದಯ ವರ್ಣಿಸುವಂತೆ ಅವಳ ಮುಖದ ಮೇಲಿನ ನೀರ ಹನಿಯು ಒಂದೊಂದು ಮುತ್ತಿನಂತೆ. ಅವಳ ಆ ಕಣ್ಣು ಬಾನಲ್ಲಿ ಮಿಂಚುತ್ತಿರುವ ನಕ್ಷತ್ರದಂತೆ . ಅವಳ ಆ ಮುಖ ಕಮಲದ ಹೂವಿನಂತೆ . ನನ್ನ ಕನಸಿನ ಕನ್ಯೆಯ ಪ್ರತಿಕೃತಿ ಇವಳೇನೋ ಎಂಬಂತೆ ಭಾಸವಾಗಿತ್ತು. ನನ್ನ ಕಲ್ಪನೆಯ ಸವಿಗನಸಿನಲ್ಲಿ ತೆಲಾಡುತ್ತಿರಲು ನೋಡಿದೆ ಗ್ರೀನ್ ಸಿಗ್ನಲ್. ಟ್ರಾಫಿಕ್ ಗ್ರೀನ್ ಸಿಗ್ನಲ್! ಒಲ್ಲದ ಮನಸ್ಸಿನಿಂದ ಗಾಡಿ ಸ್ಟಾರ್ಟ್ ಮಾಡಿ ಚಲಿಸಲು ಸುರು ಮಾಡಿದೆ. ಹೋಂಡ ಅಕ್ಟಿವ ಮುಂದೆ ಹೋಗುತ್ತಲೇ ಇತ್ತು. ನಾನು ಮಾತ್ರ ಇನ್ನೂ ಆ ಸಿಗ್ನಲಲ್ಲೇ ಇದ್ದೆ.

ಹೀಗೆ ನಮ್ಮ ಜೀವನ ಸಾಗುತ್ತಲೇ ಇದೆ. ಒಂದು ಸಿಗ್ನಲ್ಲಿನಿಂದ ಇನ್ನೊಂದು ಸಿಗ್ನಲ್ಲಿನತ್ತ... ...