ನೆನಪಿನ ಪುಟಗಳನ್ನು ತೆರೆದಾಗ..

ಅದೇ ಬಸ್ಸ್ಟಾಂಡ್. ಒಂದು ಮೂಲೆಯಲ್ಲಿ ಆತ  ಕೂತ್ಕೊಂಡಿದ್ದಾನೆ. ತುಂತುರು ಮಳೆ ಜಿನುಗುತ್ತಿತ್ತು. ಆತನ ಕಣ್ಣಲ್ಲಿ ಕಣ್ಣೀರ ಹನಿ ಇಣುಕುತ್ತಿತ್ತು ಒಂದು ಕಡೆಯಿಂದ ಬಸ್ಸಿಗಾಗಿ ಕರೆಯುವವರು ಮಡಿಕೇರಿ...ವಿರಾಜಪೇಟೆ...ಪೊನ್ನಂಪೇಟೆ...ಮತ್ತೊಂದು ಕಡೆಯಿಂದ ಕಡಲೆ, ಟೀ, ಕಾಫಿ ಮಾರುವವರ ಕೂಗಾಟ. ಇವರುಗಳ ಮಧ್ಯೆ ಈತನ ಕೂಗು ಯಾರಿಗಾದರು ಕೇಳಿಸೀತೆ?. ಅಲ್ಲಿದ್ದ ಪ್ರತಿಯೊಬ್ಬರೂ ಕಾರ್ಯ ಮಗ್ನವಾಗಿದ್ದರು ತಮ್ಮ ಬದುಕಿನ ಗುರಿಯತ್ತ ಸಾಗುವಲ್ಲಿ... ಆತನ ದುಃಖದಿಂದ ಕೂಡಿದ ಚಿಕ್ಕ ಮುಖ ನೋಡಿ ಬಸ್ಸ್ಟಾಂಡಿನ ಗೋಡೆಗಳೂ ನಿಸ್ಸಾಹಾಯಕವಾಗಿದ್ದವು. ಮಡಿಲ ಮಗುವೊಂದು ಅಮ್ಮನ ಸೆರಗಿನಿಂದ ಹೊರಗಿಣುಕಿ ನೋಡಿದಾಗ ಅವನಿಗೆ ಅಮ್ಮನ ನೆನಪಾಗದೆ ಇದ್ದೀತೆ?. ಮನೆಯ ನೆನಪಗಳು ಎದೆಯಂಗಳದಲ್ಲಿ ಹಾರಿಹೊಂದಂತೆ ನೋವಿನ ಗೆರೆಗಳು ಇನ್ನು ದಪ್ಪವಾಗಿದ್ದವು.

ಮೊದಲೇ ನಿರ್ಧರಿಸಿದಂತೆ ಆತ ಬೆಳಿಗ್ಗೆ ಆರಕ್ಕೆ ಹಾಸ್ಟೆಲಿನಿಂದ ಹೊರಬಂದಿದ್ದ. ಅಂದೇಕೋ ಸೋಮಾರಿ ಸೂರ್ಯನೂ ಮನೆ ಬಿಟ್ಟಿರಲಿಲ್ಲ. ತಳ್ಳುಗಾಡಿಯವರು ತರಕಾರಿ ತುಂಬಿದ ಗಾಡಿಗಳೊಂದಿಗೆ ಮುಂದೆ ಹೋಗುತ್ತಲೇ ಇದ್ದರು. ಆತನೂ ಮುಂದೆಕ್ಕೆ ಸಾಗಿದ್ದ ಗೊತ್ತು ಗುರಿಯಿಲ್ಲದೆ. ಚಿಲಿಪಿಗುಟ್ಟುತ್ತಿರುವ ಹಕ್ಕಿಗಳೂ ಆತನಿಗೆ ಸಾಥ್ ನೀಡದೆ ಹೋದವು. ಅಂತು ಇಂತೂ ಕೊನೆಗೆ ತಲುಪಿದ್ದು ಅದೇ ಗೊನಿಕೊಪ್ಪಲಿನ ಬಸ್ಸು ತಂಗುದಾಣ. ತರಾತುರಿಯಿಂದ ಓಡಾಡುವ ಬಸ್ಸುಗಳ , ಜನಗಳ ಮಧ್ಯೆ ಇವನು ಒಬ್ಬಂಟಿಯಾಗಿದ್ದ.

ಏನೋ ಇಂಜಿನಿಯರಿಂಗ್ ಓದಬೇಕೆಂಬ ಆಸೆಯಿಂದ ಇಂಜಿನಿಯರಿಂಗ್ ಕಾಲೇಜ್ ಸೇರಿದ್ದೂ ಆಯಿತು. ಕಾಲೇಜ್ ಹಾಸ್ಟೆಲ್ ಸೇರೋಣವೆಂದರೆ ಕೈಯಲ್ಲಿ ಅಸ್ಟೊಂದು ದುಡ್ಡಿಲ್ಲ. ಕಾಲೇಜ್ ಸ್ಟಾರ್ಟ್ ಆಗಿ ಎರಡು ದಿನ ಯಾರೋದೋ ಮನೆಯಲ್ಲಿ ಅಡ್ಜಸ್ಟ್ ಮಾಡಿದ್ದ. ಇನ್ನು ಮುಂದೆ? ಮಂಗಳೂರಿಂದ ಒಂದು ಹಳ್ಳಿಯಿಂದ ಬಂದ ಇವನಿಗೆ ಇಲ್ಲಿ ಗೊತ್ತಿರುವವರು ಯಾರು ಇರಲಿಲ್ಲ. ಸರಕಾರಿ ಹಾಸ್ಟೆಲ್ನಲ್ಲಿ ಕೇಳಿದಾಗ ಸೀಟ್ ಬರ್ತಿ ಆಗಿದೆ ಎಂಬ ಉತ್ತರ. ಗೋಣಿಕೊಪ್ಪಲು ಕಾಲೇಜಿನ ಕ್ಲೆರ್ಕಿನ ಸಹಾಯದಿಂದ ಸ್ವಲ್ಪ ದಿನದ ಮಟ್ಟಿಗೆ ಅಂತ ಸರಕಾರಿ ಹಾಸ್ಟೆಲಿನಲ್ಲಿ ಮತ್ತೆ ಅಡ್ಜಸ್ಟ್ ಮಾಡ್ಕೊಂಡ. ಹಾಸ್ಟೆಲಿನ ವಾರ್ಡನ್, ಮೇಲಾಧಿಕಾರಿಗಳಿಗೆ ಈ ವಿಷಯ ಗೊತ್ತಿಲ್ಲ.ಅಡುಗೆಯವರ ಮತ್ತು ಈತನ ಮಧ್ಯೆ ಒಳ ಒಪ್ಪಂದ! ದಿನಗಳು ಹೀಗೆ ಮುಂದುವರಿದವು. ಹಾಸ್ಟೆಲಿನ ದಿನಗಳನ್ನು ಬರೆಯಲು ಹೊರಟರೆ ಅವನಿಗೆ ಇನ್ನೊಂದು ಲೇಖನ ಬೇಕಾಗಬಹುದೇನೋ.

ಅಂದು ಅಕ್ಟೋಬರ್ ೨. ಗಾಂಧೀ ತಾತ ಹುಟ್ಟಿದ ದಿನ. ಹಾಸ್ಟೆಲಿನಲ್ಲಿ ತುಂಬಾ ಕಾರ್ಯಕ್ರಮಗಳಿದ್ದ ಕಾರಣ ಅಧಿಕಾರಿಗಳ ಆಗಮನ ಇತ್ತು. ಅಡುಗೆಯವರ ಸೂಚನೆಯಂತೆ ಅಂದು ಆತ ಹಾಸ್ಟೆಲಿನಲ್ಲಿ ಯಾರಿಗೂ ಸಿಗಬಾರದಾಗಿತ್ತು. ಅಧಿಕಾರಿಗಳಿಗೆ ಗೊತ್ತಾದರೆ ಹಾಸ್ಟೆಲಿನಿಂದ ಹೊರಗೆ ಹಾಕುವುದಂತೂ ಸತ್ಯ. ಅಡುಗೆಯವರೂ ಜೊತೆಗೆ. ಹಿಂದಿನ ದಿನ ನಿದ್ದೆಯಲ್ಲೂ ಅದೇ ಯೋಚನೆ. ನಾಳೆ ಬೆಳಿಗ್ಗೆ ೬ ಕ್ಕೆ ಸರಿಯಾಗಿ ಇಲ್ಲಿಂದ ಹೊರಡಬೇಕು ಅಷ್ಟೇ ಗೊತ್ತು. ಕೊನೆಗೆ ತಲುಪಿದ್ದು ಅದೇ ಗೊನಿಕೊಪ್ಪಲಿನ ಬಸ್ಸು ತಂಗುದಾಣ. ಇದರೊಂದಿಗೆ ಮೊದಲ ಸಾರಿ ಮನೆಯಿಂದ ಹೊರಗಡೆಗಿನ ವಾಸ ಅವನಿಗೆ ನುಂಗಲಾರದ ತುತ್ತಾಗಿತ್ತು. ಅಂತು ಹೇಗೋ ಆ ಒಂದು ದಿನವನ್ನು ದುಖದಲ್ಲಿಯೇ ಕಳೆದ. ರಾತ್ರಿ ಎಂಟು ಗಂಟೆಗೆ ಹಾಸ್ಟೆಲ್ಗೆ ಬಂದು ನಿದ್ರಾದೇವಿಗೆ ಶರಣಾದ. ಮತ್ತೆ ನೆನಪು ಕನಸುಗಳೊಂದಿಗೆ...ಆ ಮಗು ಮಾತ್ರ ಮತ್ತೆ ಮತ್ತೆ ಕಣ್ಣಂಚಿನ ಪರೆದೆಯಲ್ಲಿ ಬರುತ್ತಾ ಇತ್ತು.

ಇದು ನನ್ನ ಜೀವನದಲ್ಲಿ ನಡೆದ ನಿಜ ಘಟನೆ. ಮತ್ತೆ ಕಾಲೇಜ್ ಚೇಂಜ್ ಮಾಡಿ ಇಂಜಿನಿಯರಿಂಗ್ ಓದು ಮುಗಿಸಿದ್ದು ಈಗ ಇತಿಹಾಸ. ಬಾಲ್ಯದಲ್ಲಿನ ಬಡತನದಿಂದ ಕಳೆದ ಆ ದಿನಗಳಿಂದ ನಾನು ತುಂಬಾ ಕಲಿತೆ. ನಾನು ಯಾವಾಗಲೂ ಹೇಳ್ತುರ್ತೀನಿ "ಆವಾಗ ಮನೆಯಲ್ಲಿ ಮನಿ ಇರಲ್ಲಿಲ್ಲ, ಮಾನವೀಯತೆ ಇತ್ತು. "  ಪ್ರತಿಯೊಂದು ನೋವಿನಲ್ಲೂ ಒಂದೊಂದು ಪಾಠವಿರುತ್ತದೆ ಅಲ್ಲವೇ..?

ಸುಮ್ನೆ ಹೀಗೆ

ಮನದ ಭಾವನೆಗಳನ್ನು ಗೀಚಬೇಕೆಂಬ ಕನಸಿನೊಂದಿಗೆ ಬೆಡ್ ಮೇಲೆ ಬಿದ್ದುಕೊಂಡೆ ಪುಸ್ತಕ ಪೆನ್ನಿನ ಜೊತೆಗೆ. ಅದು ಯಾವಾಗ ನಿದ್ದೆ ಹತ್ತಿತೋ?. ಕನಸು ಕನಸಾಗಿಯೇ ಇತ್ತು. ಪೆನ್ನು ಪುಸ್ತಕದ ಖಾಲಿ ಖಾಲಿ ಹಾಳೆಗಳನ್ನು ನೋಡುತ್ತಾ ಅಲ್ಲೇ ಮಲಗಿತ್ತು. ಸೂರ್ಯ ಸೋಮಾರಿ ಆಗಲಿಲ್ಲ. ಅವನು ಆಗಲೇ ಎದ್ದು ಕಿಟಕಿನಂಚಿನಿಂದ ಇಣುಕುತಿದ್ದ. ನಾನೇ ಸೋಮಾರಿಯಾಗಿದ್ದೆ!
***************

ಏನೋ ತಪ್ಪು ಮಾಡಿದ್ದೇನೆಂದು ನೋವಿನಿಂದ ಕೂಡಿದ ಭಾರವಾದ ಮನಸ್ಸಿನಿಂದ  ಕಿಟಕಿಯಿಂದ ಇಣುಕಿ ನೋಡುತಲಿದ್ದೆ... ದೂರದಲ್ಲಿ ಮಗುವೊಂದು ತನ್ನ ಪುಟ್ಟ ಕಾಲುಗಳಿಂದ ತಪ್ಪು ತಪ್ಪು ಹೆಜ್ಜೆಗಳೊಂದಿಗೆ ನಡೆಯಲು ಪ್ರಯತ್ನಿಸುತ್ತಿತ್ತು.
***************

ಸ್ವಲ್ಪ ಕೆಲಸದ ಒತ್ತಡ ಜಾಸ್ತಿ ಇದ್ದುದರಿಂದ ಬಳಲಿದ್ದ ಅವಳಿಗೆ  ಬೆಡ್ ಮೇಲಿಂದ ಎದ್ದೇಳಲು ಏನೋ ಸುಸ್ತು. ಮನಸಿಲ್ಲದ ಮನಸ್ಸಿನಿಂದ ಮಸುಕು ತೆಗೆದು ಇನ್ನು ಕಾಫಿ ಮಾಡ್ಬೇಕಲ್ವ ಎಂದು ನೋಡಿದರೆ ಅಲ್ಲೇ ಪಕ್ಕದಲ್ಲಿ ಕಾಫಿ ಅವಳಿಗಾಗಿ ಕಾಯುತ್ತಿತ್ತು. ಅಡುಗೆಮನೆಯಿಂದ ಗಂಡ ಸುಮ್ನೆ ಮಲ್ಕೋ .... ನಾನಿದ್ದೇನೆ ಎಂದು ಕಣ್ಣು ಮಿಟುಕಿಸಿದಾಗ ಗಂಡನ ಮೇಲಿನ ಪ್ರೀತಿ ಇನ್ನು ಬೆಚ್ಚಗಾಗಿತ್ತು ಕಾಫಿಯ ಜೊತೆಗೆ.
ಸುಂದರ ಬದುಕಿನ ಅನೋನ್ಯತೆಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಎಷ್ಟು ಮುಖ್ಯ ಅಲ್ಲವೇ...ಸ್ವಲ್ಪ ತುಂಟತನ ತರಲೆಗಳೂ ಇದ್ದರೆ ಇನ್ನು ಖುಷಿ!!
***************