ಹೇಗೆ ಮರೆಯೋಕ್ಕಾಗುತ್ತೆ

ಕಳೆದ ಎರಡು ತಿಂಗಳಿಂದ ಕೆಲಸದ ನಿಮಿತ್ತ ಮರಳುಗಾಡು ಬಹರೈನಿನಲ್ಲಿ ಇರಬೇಕಾಗಿರುವುದರಿಂದ ಒಂಥರಾ ಒಂಟಿ ಜೀವನದ ಅನುಭವವನ್ನು ಪಡೆಯುತ್ತಿದ್ದೇನೆ ಎಂದರೆ ಅತಿಶಯವಾಗದು. ನನ್ನ ಬಾಲ್ಯದ ಮಧುರ ನೆನಪುಗಳೇ ನನಗೆ ಈಗ ಸಾಥ್ ನೀಡುತ್ತಿವೆ. ಅವುಗಳಲ್ಲಿ ಒಂದೆರಡನ್ನು ಅಕ್ಷರ ರೂಪಕ್ಕೆ ತಂದು ನಿಮ್ಮ ಮುಂದೆ ಇಟ್ಟಿದ್ದೇನೆ. ಓದಿ.. ಚೆನ್ನಾಗಿಲ್ಲಂದ್ರೆ ಬಯ್ಬೇಡಿ ಪ್ಲೀಸ್ ನಾ ...


ನನ್ನ ಹೈಸ್ಕೂಲ್ ಜೀವನದಲ್ಲಿ ನಡೆದ ಘಟನೆ:- ಎಲ್ಲಡೆ ಇರವಂತೆಯೇ ನಮ್ಮ ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡುವ ಮುಖಾಂತರ ತರಗತಿಗಳು ಪ್ರಾರಂಭವಾಗುತ್ತವೆ. ಎಲ್ಲರೂ ಸಾಲಾಗಿ ನಿಂತು ಗೌರವ ಕೊಡಬೇಕು. ನಾನು ಮತ್ತು ನನ್ನ ಬಾಲ್ಯ ಸ್ನೇಹಿತ ಜೊತೆಗೆ ನಿಂತೆರೆನೆ ಅದಕ್ಕೊಂದು ಮಜಾ. ಪ್ರಾರ್ಥನೆ ಸುರುವಾಗಿತ್ತು. ನಾನೇನೋ ಕೀಟಲೆ ಮಾಡಿದೆ ಗೆಳಯನಿಗೆ. ತರಲೆ , ಕೀಟಲೆ,ನಗುವುದು, ನಗಿಸುವುದು ನಮ್ಮ ಅಲಿಖಿತ ನಿಯಮವಾಗಿತ್ತು. ನಗುವನ್ನು ಹೊಟ್ಟೆಯೊಳಗಿಂದ ಒತ್ತರಿಸಿಕೊಳ್ಳಲು ಸಾಧ್ಯವಾಗದೇ ಗುಸುಕ್ಕೆಂದು ನಕ್ಕುಬಿಟ್ಟ. ನಾನೂ ಜೋರಾಗಿ ನಕ್ಕುಬಿಟ್ಟೆ. ಕ್ಲಾಸ್ ಟೀಚರ್ ನೋಡಬೇಕೇ? . ಹೊಡೆತದ ಜೊತೆಗೆ ಬೈಗುಳದ ಮಂಗಳಾರತಿ ಆಯಿತು. ನೋವಲ್ಲೂ ಖುಷಿಯಿತ್ತು ಬಿಡಿ. ಇನ್ನೊಂದು ಸಲ ಮಾಡಿದರೆ ಪ್ರಿನ್ಸಿಪಾಲ್ಗೆ ಕಂಪ್ಲೇಂಟ್ ಅಂತ ಗದರಿಸಿಬಿಟ್ರು. ಮಾಡಿದ ತಪ್ಪಿಗಾಗಿ ಮರುದಿನ ಪ್ರಾರ್ಥನಾ ಸಮಯದಲ್ಲಿ ಎಲ್ಲರ ಮುಂದೆ ಕ್ಷಮೆ ಕೇಳಬೇಕು ಎಂದು ಕಟ್ಟಪ್ಪಣೆ ಬೇರೆ. ಆಯಿತು ಮರುದಿನ ಎಲ್ಲರ ಮುಂದೆ ಹೋದೆವು. ಅದೇನೋ ಭಯ. ಸಾವಿಗಿಂತಲೂ ಹೆಚ್ಚಿನದ್ದು. ಎಲ್ಲರ ಮುಂದೆ ಹೋಗ್ಬೇಕಲ್ವ. ಕೈಮುಗಿದು ಒಕ್ಕೊರಲಿನಿಂದ "ಇನ್ನು ಮುಂದೆಂದೂ ಈ ತಪ್ಪು ಮಾಡಲ್ಲ. ನಮ್ಮನ್ನು ಕ್ಷಮಿಸಬೇಕು" ಎಂದೆವು. ಮರುಕ್ಷಣ ಮತ್ತೆ ಗೊಳ್ಳೆಂದು ನಗಬೇಕೇ... ಅಲ್ಲಿದ್ದ ಎಲ್ಲರೂ ನಮಗೆ ಸಾಥ್ ನೀಡಿ ಜೋರಾಗಿ!! ಕ್ಲಾಸ್ ಟೀಚರ್ ಜೊತೆಯಾದರು ನಮಗೆ ಅಂದರೆ ನಮ್ಮ ಪೋಕರಿತನ ಎಸ್ತಿರ್ಬೇಕು ನೀವೇ ಹೇಳಿ. ಮತ್ತೆ ಪ್ರಿನ್ಸಿಪಾಲ್ಗೆ ಕ್ಷಮಾಪನ ಪತ್ರ ಬರೆದು ಅಲ್ಲಿ ಸ್ವಲ್ಪ ಮಂಗಳಾರತಿ ಮಾಡಿಸ್ಕೊಂಡಿದ್ದು ಈಗ ಇತಿಹಾಸ.

ಕಳೆದು ಹೋದ ದಿನಗಳನ್ನು ನೆನಿಸಿಕೊಂಡರೆ ನಗು ಬರುತ್ತದೆ ಅಲ್ಲವೇ ? ದುರಾದ್ರಷ್ಟಕರ ಎಂದರೆ ಈ ಸವಿ ನೆನಪನ್ನು ಹಂಚಿಕೊಳ್ಳಲು ನನ್ನೊಂದಿಗಿಲ್ಲ ಅವನು. ವಿಧಿಯಾಟದಲ್ಲಿ ಸಿಕ್ಕಿ ಬರೀ ನೆನಪ್ಗಳನ್ನು ಬಿಟ್ಟು ಬಲು ದೂರ ಸಾಗಿದ್ದಾನೆ.

ಇನ್ನೊದು ಘಟನೆ :- ಇಂಜಿನಿಯರಿಂಗ್ ಕಾಲೇಜ್ಗೆ ಸೇರಿದ ಮೊದಲ ದಿನಗಳು. CET ಸ್ಪೆಷಲ್ ಕೌನ್ಸೆಲ್ಲಿಂಗ್ ಇದೆಯೆಂದು ಸುದ್ದಿಯಾಗಿತ್ತು. ಇನ್ನೇನು ಒಂದು ಕೈ ನೋಡೇ ಬಿಡೋಣವೆಂದು ನಮ್ಮ ನಿರ್ಧಾರ. ಗೆಳೆಯರಾದ ಲೋಕಿ, ಪ್ರಸನ್ನ ಮತ್ತು ನಾನು ಅರೆ ಮನಸ್ಸಿನಿಂದ ಹೊರಟೆವು. ಸುಳ್ಯದಿಂದ ಮೈಸೂರ್ ತನಕ ಬಸ್ಸ್ ಅಲ್ಲಿಂದ ಬೆಂಗಳೂರ್ ತನಕ ಟ್ರೈನಲ್ಲಿ ಹೋಗೊದಾಗಿ ಪ್ಲಾನ್ ಮಾಡಿದೆವು. ಯಾಕೇಂತ ಮತ್ತೆ ಹೇಳ್ತೀನಿ. ರಾತ್ರಿ ಒಂದು ಗಂಟೆಗೆ ಮೈಸೂರು ತಲುಪಿದೆವು.ಮತ್ತೆ ಕೊಡುವುದಾಗಿ ಹೇಳಿದ್ದ ಚಿಲ್ಲರೆ (೯೦) ನಿದ್ರೆಯ ಮಂಪರಿನಲ್ಲಿ ಕಂಡಕ್ಟರ್ ನಿಂದ ತೆಗೆದುಕೊಳ್ಳಲು ಮರೆತುಬಿಟ್ಟೆವು. ಕಂಡಕ್ಟರ್ ನೂ ಬೇಕಂತಲೇ ನಿದ್ದೆ ಮಾಡಿದ ಹಾಗೆ ನಟನೆ ಮಾಡಿದ್ನೇನೋ?. ಆದಿನದ ಮೊದಲ ಪೆಟ್ಟು ನಮ್ಮ ಕಿಸೆಗೆ. ಸವಾರಿ ಸಾಗಿತ್ತು ರೈಲ್ವೆ ಸ್ಟೇಷನತ್ತ . ನಮ್ಮ ಜೊತೆಗೆ ಬ್ಯಾಗುಗಳೂ!! . ಸ್ಟೇಷನಲ್ಲಿ ವಿಚಾರಿಸಿದಾಗ ಬೆಳಿಗ್ಗೆ ನಾಲ್ಕು ಗಂಟೆಗೆ ಬೆಂಗಳೂರು ರೈಲು ಎಂದು ಗೊತ್ತಾಯಿತು. ಏನ್ಮಾಡೋದು? ಪ್ಲಾಟ್ಫಾರಂ ಸುತ್ತಾಡಿ ಬರೋಣವೆಂದು ನುಗ್ಗಿದೆವು ಒಳಗಡೆ. ರಾಜಾರೋಷದಿಂದ ಸುತ್ತಾಡಿದೆವು ರೈಲ್ವೆ ಸ್ಟೇಷನ್ ನಮ್ಮದೇ ಎಂಬಂತೆ. ಎಲ್ಲಿಂದಲೋ ಬಂದ ಟ್ರೈನಿನಿಂದ ಪ್ರಯಾಣಿಕರು ಬಂದಿಳಿದರು. ಅವರ ಜೊತೆಗೆ ನಾವು ಸಾಗಿದೆವು. ಗೇಟ್ ಹತ್ತಿರ ನಿಂತಿದ್ದ ಇಬ್ಬರು ಕೆಲವರನ್ನು ತಡೆದು ಟಿಕೆಟ್ ತೋರಿಸೋಕೆ ಹೇಳ್ತಾ ಇದ್ದರು. ಇದೆಲ್ಲ ನಮಗಲ್ಲ ಎಂದು ನಾವು ಸೀದಾ ಮುಂದೆ ಹೋದೆವು. ಆ ಭೂಪರು ನಮ್ಮನ್ನೇ ಕರಿಬೇಕೆ? ಟಿಕೆಟ್ ಎಲ್ಲಿ ಅಂತ ಕೇಳಿದ. ಸಾರ್ ನಾವು ಸುಮ್ನೆ ಹೀಗೆ ಸುತ್ತಡೋಕೆ ಬಂದಿದ್ದು ಅಂತ ಹೇಳಿದೆವು . ತಪ್ಪು ನಿನ್ದೆ ಎಂಬಂತೆ!! ಇನ್ನೂ ಬಿಡದ ಅವನು ಪ್ಲಾಟ್ಫಾರಂ ಟಿಕೆಟ್ ಎಲ್ಲಿ ? ಜೀವನದಲ್ಲಿ ಮೊದಲ ಸಾರಿ ಕೇಳಿದ ಹಾಗೆ ನಮ್ಮಲ್ಲಿ ಇಲ್ಲ ಅಂತ ಸನ್ನೆ ಮಾಡಿದೆವು. ಅಲ್ಲೇ ಇದ್ದ ಸೆಕ್ಯೂರಿಟಿ ಜನರನ್ನು ಕರೆದು ನಮ್ಮನ್ನು ಕೋಣೆಯೊಳಗೆ ಕೂಡಿ ಹಾಕಲು ಹೇಳಿದ್ರು. ಅಯ್ಯೋಯೋ ಎಂಥ ಪಜೀತಿ ಆಗೊಯೋತು! ಈಗ ನಾವು ಮೂವರು ಕೋಣೆಯೊಳಗೆ ಕೈದಿಗಳ ತರಹ ! ಒಂದು ಗಂಟೆಯಾದ್ರೂ ಯಾರದು ಪತ್ತೆ ಇಲ್ಲ! ಒಂದು ಕಡೆಯಿಂದ ಭಯ. ಇನ್ನೊದು ಕಡೆಯಿಂದ ನಗು. ಕೊನೆಗೂ ಅಸಾಮಿಯೊಬ್ಬ ಬಂದು ಬನ್ನಿ ಎಂದ. ಎಲ್ಲಿ ? ಮುಂದೆ ಹೋದ ...ನಾವು ಅವನ ಹಿಂದೆ. ಯಾರೋ ಸ್ಟೇಷನ್ ಮಾಸ್ಟರ್ ಅಂತೆ . ಅವನತ್ರ ಹೋದೆವು. ಬೈಗುಳದ ಮಂಗಳರತಿಯಯಿತು. 800 ಫೈನ್ ಅಂದ. ಆದಿನದ ಎರಡೆನೆಯ ಪೆಟ್ಟು!! ಸಾರು ನಮಗೆ ಪ್ಲಾಟ್ಫಾರಂ ಟಿಕೆಟ್ ಬಗ್ಗೆ ಗೊತ್ತಿರಿಲಿಲ್ಲ. ನಾವು ಹೊಸಬ್ಬರು. ಬೆಂಗಳೂರಿಗೆ CET ಕೌನ್ಸೆಲಿಂಗ್ ಹೋಗ್ತಾ ಇದ್ದೇವಿ.ನಮ್ಮಲ್ಲಿ ಇರೋದೇ 800 ಅಂತೆಲ್ಲ ಸಬೂಬು ಹೇಳಿದೆವು. ಅವನು ಒಪ್ಪಬೇಕೆ..(ದುಡ್ಡು ಸಾರ್ ದುಡ್ಡು !) ಕೊನೆಗೆ ಹಾಗು ಹೀಗೂ ಮಾಡಿ 400 ಇಳಿಸಿದ ಅಸಾಮಿ. ನಷ್ಟದಲ್ಲಿ ಲಾಭ! ಅವತ್ತು ನಮ್ಮ ಮುಖ ನೋಡಬೇಕಿತ್ತು ನೀವು. ಅದೆಲ್ಲ ಮುಗಿದಾಗ ನಾಕು ಗಂಟೆ. ಟಿಕೆಟ್ ತೆಗೆದುಕೊಂಡು :) ಮತ್ತೆ ಸಾಗಿತು ನಮ್ಮ ಪ್ರಯಾಣ. ಬೆಂಗಳೂರಿನತ್ತ....

ಹೇಗೆ ಮರೆಯೋಕ್ಕಾಗುತ್ತೆ ಸಾರ್ ಆ ಪ್ಲಾಟ್ಫಾರಂ - ಟಿಕೆಟ್ ! ನೆನಪುಗಳು ನೆನೆಯಲಿಕ್ಕೆಂದೇ ಅಲ್ಲವೇ.

3 comments:

 1. ದಾಮು ಶರಧಿ ಮೂಲಕ ಬಂದೆ, ನಿಮ್ಮ ಬ್ಲಾಗ್ ಪೋಸ್ಟ್ ಗಳನ್ನು ವಿರಾಮದಲ್ಲಿ ಓದಿ ಪ್ರತಿಕ್ರಿಯಿಸುವೆ...ನನ್ನ ಗೂಡಿಗೆ ಒಮ್ಮೆ ಭೇಟಿ ನೀಡಿ...
  ನಿಮ್ಮ ಪ್ಲಾಟ್ ಫಾರ್ಮ್ ಅವಾಂತರ ಚೆನ್ನಾಗಿತ್ತು...

  ReplyDelete
 2. ಜಲನಯನ ಅವರೇ , ತುಂಬಾ ಖುಷಿಯಾಯಿತು. ನಿಮ್ಮ ಗೂಡಿಗೂ ನಾ ಭೇಟಿ ನೀಡುವೆ. ನೀವು ಹೀಗೆ ಬರುತ್ತಿರಿ. ಒಬ್ಬರ ಪ್ರೋತ್ಸಾಹವೇ ಮತ್ತೊಬ್ಬರಿಗೆ ಪ್ರೇರಣೆ ಅಲ್ಲವೇ..

  ReplyDelete
 3. ಜಲನಯನ ಅವರೇ , ತುಂಬಾ ಖುಷಿಯಾಯಿತು. ನಿಮ್ಮ ಗೂಡಿಗೂ ನಾ ಭೇಟಿ ನೀಡುವೆ. ನೀವು ಬರುತ್ತಿರಿ. ನಿಮ್ಮ ಪ್ರೋತ್ಸಾಹವೇ ನಮಗೆ ಪ್ರೇರಣೆ ಅಲ್ಲವೇ..

  ReplyDelete