ನೆನಪಿನ ಪುಟಗಳನ್ನು ತೆರೆದಾಗ..

ಅದೇ ಬಸ್ಸ್ಟಾಂಡ್. ಒಂದು ಮೂಲೆಯಲ್ಲಿ ಆತ  ಕೂತ್ಕೊಂಡಿದ್ದಾನೆ. ತುಂತುರು ಮಳೆ ಜಿನುಗುತ್ತಿತ್ತು. ಆತನ ಕಣ್ಣಲ್ಲಿ ಕಣ್ಣೀರ ಹನಿ ಇಣುಕುತ್ತಿತ್ತು ಒಂದು ಕಡೆಯಿಂದ ಬಸ್ಸಿಗಾಗಿ ಕರೆಯುವವರು ಮಡಿಕೇರಿ...ವಿರಾಜಪೇಟೆ...ಪೊನ್ನಂಪೇಟೆ...ಮತ್ತೊಂದು ಕಡೆಯಿಂದ ಕಡಲೆ, ಟೀ, ಕಾಫಿ ಮಾರುವವರ ಕೂಗಾಟ. ಇವರುಗಳ ಮಧ್ಯೆ ಈತನ ಕೂಗು ಯಾರಿಗಾದರು ಕೇಳಿಸೀತೆ?. ಅಲ್ಲಿದ್ದ ಪ್ರತಿಯೊಬ್ಬರೂ ಕಾರ್ಯ ಮಗ್ನವಾಗಿದ್ದರು ತಮ್ಮ ಬದುಕಿನ ಗುರಿಯತ್ತ ಸಾಗುವಲ್ಲಿ... ಆತನ ದುಃಖದಿಂದ ಕೂಡಿದ ಚಿಕ್ಕ ಮುಖ ನೋಡಿ ಬಸ್ಸ್ಟಾಂಡಿನ ಗೋಡೆಗಳೂ ನಿಸ್ಸಾಹಾಯಕವಾಗಿದ್ದವು. ಮಡಿಲ ಮಗುವೊಂದು ಅಮ್ಮನ ಸೆರಗಿನಿಂದ ಹೊರಗಿಣುಕಿ ನೋಡಿದಾಗ ಅವನಿಗೆ ಅಮ್ಮನ ನೆನಪಾಗದೆ ಇದ್ದೀತೆ?. ಮನೆಯ ನೆನಪಗಳು ಎದೆಯಂಗಳದಲ್ಲಿ ಹಾರಿಹೊಂದಂತೆ ನೋವಿನ ಗೆರೆಗಳು ಇನ್ನು ದಪ್ಪವಾಗಿದ್ದವು.

ಮೊದಲೇ ನಿರ್ಧರಿಸಿದಂತೆ ಆತ ಬೆಳಿಗ್ಗೆ ಆರಕ್ಕೆ ಹಾಸ್ಟೆಲಿನಿಂದ ಹೊರಬಂದಿದ್ದ. ಅಂದೇಕೋ ಸೋಮಾರಿ ಸೂರ್ಯನೂ ಮನೆ ಬಿಟ್ಟಿರಲಿಲ್ಲ. ತಳ್ಳುಗಾಡಿಯವರು ತರಕಾರಿ ತುಂಬಿದ ಗಾಡಿಗಳೊಂದಿಗೆ ಮುಂದೆ ಹೋಗುತ್ತಲೇ ಇದ್ದರು. ಆತನೂ ಮುಂದೆಕ್ಕೆ ಸಾಗಿದ್ದ ಗೊತ್ತು ಗುರಿಯಿಲ್ಲದೆ. ಚಿಲಿಪಿಗುಟ್ಟುತ್ತಿರುವ ಹಕ್ಕಿಗಳೂ ಆತನಿಗೆ ಸಾಥ್ ನೀಡದೆ ಹೋದವು. ಅಂತು ಇಂತೂ ಕೊನೆಗೆ ತಲುಪಿದ್ದು ಅದೇ ಗೊನಿಕೊಪ್ಪಲಿನ ಬಸ್ಸು ತಂಗುದಾಣ. ತರಾತುರಿಯಿಂದ ಓಡಾಡುವ ಬಸ್ಸುಗಳ , ಜನಗಳ ಮಧ್ಯೆ ಇವನು ಒಬ್ಬಂಟಿಯಾಗಿದ್ದ.

ಏನೋ ಇಂಜಿನಿಯರಿಂಗ್ ಓದಬೇಕೆಂಬ ಆಸೆಯಿಂದ ಇಂಜಿನಿಯರಿಂಗ್ ಕಾಲೇಜ್ ಸೇರಿದ್ದೂ ಆಯಿತು. ಕಾಲೇಜ್ ಹಾಸ್ಟೆಲ್ ಸೇರೋಣವೆಂದರೆ ಕೈಯಲ್ಲಿ ಅಸ್ಟೊಂದು ದುಡ್ಡಿಲ್ಲ. ಕಾಲೇಜ್ ಸ್ಟಾರ್ಟ್ ಆಗಿ ಎರಡು ದಿನ ಯಾರೋದೋ ಮನೆಯಲ್ಲಿ ಅಡ್ಜಸ್ಟ್ ಮಾಡಿದ್ದ. ಇನ್ನು ಮುಂದೆ? ಮಂಗಳೂರಿಂದ ಒಂದು ಹಳ್ಳಿಯಿಂದ ಬಂದ ಇವನಿಗೆ ಇಲ್ಲಿ ಗೊತ್ತಿರುವವರು ಯಾರು ಇರಲಿಲ್ಲ. ಸರಕಾರಿ ಹಾಸ್ಟೆಲ್ನಲ್ಲಿ ಕೇಳಿದಾಗ ಸೀಟ್ ಬರ್ತಿ ಆಗಿದೆ ಎಂಬ ಉತ್ತರ. ಗೋಣಿಕೊಪ್ಪಲು ಕಾಲೇಜಿನ ಕ್ಲೆರ್ಕಿನ ಸಹಾಯದಿಂದ ಸ್ವಲ್ಪ ದಿನದ ಮಟ್ಟಿಗೆ ಅಂತ ಸರಕಾರಿ ಹಾಸ್ಟೆಲಿನಲ್ಲಿ ಮತ್ತೆ ಅಡ್ಜಸ್ಟ್ ಮಾಡ್ಕೊಂಡ. ಹಾಸ್ಟೆಲಿನ ವಾರ್ಡನ್, ಮೇಲಾಧಿಕಾರಿಗಳಿಗೆ ಈ ವಿಷಯ ಗೊತ್ತಿಲ್ಲ.ಅಡುಗೆಯವರ ಮತ್ತು ಈತನ ಮಧ್ಯೆ ಒಳ ಒಪ್ಪಂದ! ದಿನಗಳು ಹೀಗೆ ಮುಂದುವರಿದವು. ಹಾಸ್ಟೆಲಿನ ದಿನಗಳನ್ನು ಬರೆಯಲು ಹೊರಟರೆ ಅವನಿಗೆ ಇನ್ನೊಂದು ಲೇಖನ ಬೇಕಾಗಬಹುದೇನೋ.

ಅಂದು ಅಕ್ಟೋಬರ್ ೨. ಗಾಂಧೀ ತಾತ ಹುಟ್ಟಿದ ದಿನ. ಹಾಸ್ಟೆಲಿನಲ್ಲಿ ತುಂಬಾ ಕಾರ್ಯಕ್ರಮಗಳಿದ್ದ ಕಾರಣ ಅಧಿಕಾರಿಗಳ ಆಗಮನ ಇತ್ತು. ಅಡುಗೆಯವರ ಸೂಚನೆಯಂತೆ ಅಂದು ಆತ ಹಾಸ್ಟೆಲಿನಲ್ಲಿ ಯಾರಿಗೂ ಸಿಗಬಾರದಾಗಿತ್ತು. ಅಧಿಕಾರಿಗಳಿಗೆ ಗೊತ್ತಾದರೆ ಹಾಸ್ಟೆಲಿನಿಂದ ಹೊರಗೆ ಹಾಕುವುದಂತೂ ಸತ್ಯ. ಅಡುಗೆಯವರೂ ಜೊತೆಗೆ. ಹಿಂದಿನ ದಿನ ನಿದ್ದೆಯಲ್ಲೂ ಅದೇ ಯೋಚನೆ. ನಾಳೆ ಬೆಳಿಗ್ಗೆ ೬ ಕ್ಕೆ ಸರಿಯಾಗಿ ಇಲ್ಲಿಂದ ಹೊರಡಬೇಕು ಅಷ್ಟೇ ಗೊತ್ತು. ಕೊನೆಗೆ ತಲುಪಿದ್ದು ಅದೇ ಗೊನಿಕೊಪ್ಪಲಿನ ಬಸ್ಸು ತಂಗುದಾಣ. ಇದರೊಂದಿಗೆ ಮೊದಲ ಸಾರಿ ಮನೆಯಿಂದ ಹೊರಗಡೆಗಿನ ವಾಸ ಅವನಿಗೆ ನುಂಗಲಾರದ ತುತ್ತಾಗಿತ್ತು. ಅಂತು ಹೇಗೋ ಆ ಒಂದು ದಿನವನ್ನು ದುಖದಲ್ಲಿಯೇ ಕಳೆದ. ರಾತ್ರಿ ಎಂಟು ಗಂಟೆಗೆ ಹಾಸ್ಟೆಲ್ಗೆ ಬಂದು ನಿದ್ರಾದೇವಿಗೆ ಶರಣಾದ. ಮತ್ತೆ ನೆನಪು ಕನಸುಗಳೊಂದಿಗೆ...ಆ ಮಗು ಮಾತ್ರ ಮತ್ತೆ ಮತ್ತೆ ಕಣ್ಣಂಚಿನ ಪರೆದೆಯಲ್ಲಿ ಬರುತ್ತಾ ಇತ್ತು.

ಇದು ನನ್ನ ಜೀವನದಲ್ಲಿ ನಡೆದ ನಿಜ ಘಟನೆ. ಮತ್ತೆ ಕಾಲೇಜ್ ಚೇಂಜ್ ಮಾಡಿ ಇಂಜಿನಿಯರಿಂಗ್ ಓದು ಮುಗಿಸಿದ್ದು ಈಗ ಇತಿಹಾಸ. ಬಾಲ್ಯದಲ್ಲಿನ ಬಡತನದಿಂದ ಕಳೆದ ಆ ದಿನಗಳಿಂದ ನಾನು ತುಂಬಾ ಕಲಿತೆ. ನಾನು ಯಾವಾಗಲೂ ಹೇಳ್ತುರ್ತೀನಿ "ಆವಾಗ ಮನೆಯಲ್ಲಿ ಮನಿ ಇರಲ್ಲಿಲ್ಲ, ಮಾನವೀಯತೆ ಇತ್ತು. "  ಪ್ರತಿಯೊಂದು ನೋವಿನಲ್ಲೂ ಒಂದೊಂದು ಪಾಠವಿರುತ್ತದೆ ಅಲ್ಲವೇ..?

6 comments:

  1. ನಾನೇನೊ ಕಲ್ಪನೆ ಅಂದುಕೊಂಡೆ ಓದಿದೆ ಆದರೆ ಕೊನೆಗೆ ಅದೂ ನಿಮ್ಮ ಜೀವನದಲ್ಲೇ ನಡೆದ ನಿಜ ಘಟನೆ ಅಂತ ಗೊತ್ತಾಗಿ ವಿಶಾದವೆನ್ನಿಸಿತು... ಆದರೂ ಅಲ್ಲಿ ಪಾಠ ಕಲಿತೆ ಅಂದಿರಲ್ಲ ಅದು ಸರಿ, ಇಂಥ ಘಟನೆಗಳೆ ಜೀವನ ಕಲಿಸುವ ಪಾಠಗಳು...

    ReplyDelete
  2. ಪ್ರಭುವರೆ,
    ನಿಮ್ಮ ಲೇಖನಗಳನ್ನು ಓದಿ ನನಗೂ ಏನೋ ಬರೆಬೇಕನಿಸಿತು.... ಸುಮ್ಮ್ಣನೆ ಹೀಗೆ ನನ್ನ ಭಾವನೆಗಳಿಗೆ ಅಕ್ಷರ ರೂಪ ನೀಡಲು ಒಂದು ಪ್ರಯತ್ನ. ತಪ್ಪಿದ್ದರೆ ತಿದ್ದಿ ನನ್ನ ಮುನ್ನಡೆಸ್ತೀರಲ್ವ ನೀವೆಲ್ಲ?.

    ReplyDelete
  3. "ಪ್ರತಿಯೊಂದು ನೋವಿನಲ್ಲೂ ಒಂದೊಂದು ಪಾಠವಿರುತ್ತದೆ" - ನಿಮ್ಮ ಮಾತು ಅಕ್ಷರಃ ಸತ್ಯ

    ReplyDelete
  4. i was thinking this is a story while reading but this is real story of urs... nijavagalo damu tumba kasta patidiya adake nodu ivaga ninu ondu valle Position nalli irodu, kasta patarine sukha sigodu anta idanna odi tilkobeku all the best for ur future..

    ReplyDelete